ಗ್ರೀಕ್ ಕಾವ್ಯ -

 	ಸಾಧನೆಯ ದೃಷ್ಟಿಯಿಂದಾಗಲಿ ಪ್ರಭಾವದ ದೃಷ್ಟಿಯಿಂದಾಗಲಿ ಪ್ರಾಚೀನ ಗ್ರೀಸಿನ ಕಾವ್ಯ ಹಿರಿದಾದುದು. ಇಡೀ ಯೂರೋಪಿನ ಸಾಹಿತ್ಯದ ಮೇಲೆ ಗ್ರೀಕ್ ಕಾವ್ಯ ಪರಿಣಾಮಕಾರಿ ಪ್ರಭಾವ ಬೀರಿತು. ಅಲ್ಲದೆ ವಿಶ್ವಸಾಹಿತ್ಯಕ್ಕೆ ಸಾಧನೆಯ ಉತ್ತುಂಗ ಶಿಖರಗಳನ್ನು ನಿರ್ಮಿಸಿಕೊಟ್ಟಿತು. ಇಂದು ಉಳಿದುಬಂದಿರುವುದು ಗ್ರೀಕ್ ಕಾವ್ಯದ ಒಂದು ಭಾಗ ಅಷ್ಟೆ. ಬಿಜಾóಂಟಿಯಂನ ವಿದ್ವಾಂಸರ ಶ್ರಮ ಮತ್ತು ಶ್ರದ್ಧೆಗಳಿಂದ ಇಷ್ಟಾದರೂ ಉಪಲಬ್ಧವಾಗಿದೆ. ಅಳಿದುಳಿದಿರುವುದು ಅದೆಷ್ಟೆ ಸ್ವಲ್ಪವಾದರೂ ಅದರ ಗುಣಮಟ್ಟ ಮಾತ್ರ ಎಂಥವರನ್ನೂ ಬೆರೆಗುಗೊಳಿಸುವಂತಿದೆ. 

ಗ್ರೀಕ್ ಸಾಹಿತ್ಯ ಹೇಗೆ ಪ್ರಾರಂಭವಾಯಿತು ಎನ್ನುವುದು ತಿಳಿದಿಲ್ಲ. ಹೋಮರನ ಇಲಿಯಡ್ ಮತ್ತು ಆಡಿಸಿಗಳು ನಮಗೆ ದೊರೆತಿರುವ ಅತಿ ಪ್ರಾಚೀನ ಕೃತಿಗಳು. ಇವನ ನಿಜವಾದ ಹೆಸರು, ಕಾಲ, ದೇಶ, ಕೃತಿಗಳು ಎಲ್ಲ ವಾದಗ್ರಸ್ತ ವಿಷಯಗಳು. ಈತ ಕ್ರಿ.ಪೂ. ಎಂಟನೆಯ ಅಥವಾ ಒಂಭತ್ತನೆಯ ಶತಮಾನಕ್ಕೆ ಸೇರಿದ್ದಿರಬೇಕು. ಹೋಮರನ ಮಹಾಕಾವ್ಯಗಳಂಥ ಶ್ರೇಷ್ಠ ಕೃತಿಗಳು ಹಿಂದಣ ಒಂದು ಪರಂಪರೆ ಮತ್ತು ಹಲವು ಕವಿಗಳ ಸಿದ್ಧತೆ ಇಲ್ಲದೆ ಉದ್ಭವಿಸಲಾರವು. (ಆಫ್ರ್ಯೂಸ್ ಮತ್ತು ಮ್ಯೂಸಿಯಸ್ ಎಂಬ ಕವಿಗಳ ಹೆಸರು ಕೇಳಿಬರುತ್ತದೆ. ವಿವರಗಳಾಗಲಿ ಕೃತಿಗಳಾಗಲಿ ದೊರೆತಿಲ್ಲ.) ತನ್ನ ಹಿಂದಿನ ಲಾವಣಿಕಾರರ ಹಾಡುಗಳ ಸಾಮಗ್ರಿಯನ್ನೂ ವರ್ಣನೆಯ ವಿಧಾನವನ್ನೂ ಛಂದಸ್ಸನ್ನೂ ಬಳಸಿಕೊಂಡು ಹೋಮರ್ ಜಗತ್ತಿನ ಅತಿಶ್ರೇಷ್ಠ ಕಾವ್ಯಗಳಲ್ಲಿ ಎರಡನ್ನು ರಚಿಸಿದ. ಯೂರೋಪಿನಲ್ಲಿ ಮಹಾಕಾವ್ಯ ಉದಿಸಿತು. ಹೋಮರ್ ಕಾಲಮಾನದಲ್ಲಿ ಮಾತ್ರ ಆದಿಕವಿಯಲ್ಲ. ಮಹಾಕಾವ್ಯ, ಗಂಭೀರನಾಟಕ, ವಿನೋದ ನಾಟಕ ಇವೆಲ್ಲದರ ಚರಿತ್ರೆಗಳೂ ಅವನ ಕಾವ್ಯಗಳಲ್ಲಿ ಪ್ರಾರಂಭವಾದುವು. ಪ್ರಾಯಶಃ ಇವನ ಸಮಕಾಲೀನ ಹೆಸಿಯಡ್. ಇವನ ಮಹಾಕೃತಿ ವಕ್ರ್ಸ್ ಅಂಡ್ ಡೇಸ್. (ಇವನ ಕೃತಿ ಮೂಲದಲ್ಲಿದ್ದಂತೆ ಉಳಿದು ಬಂದಿದೆ ಎನ್ನವಂತಿಲ್ಲ.) ಈತ ಕಳೆದು ಹೋದ ಭವ್ಯ ವೀರಯುಗವನ್ನು ಬಿತ್ತರಿಸುವುದಿಲ್ಲ. ಸಮಸ್ಯೆಗಳಿಂದ ಮತ್ತು ಕಷ್ಟಗಳಿಂದ ತುಂಬಿದ ಸಮಕಾಲೀನ ಸಮಾಜವನ್ನು ಚಿತ್ರಿಸುತ್ತಾನೆ. ಹೋಮರನ ಕಾವ್ಯಗಳಲ್ಲಿ ಬಡವರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಸಿಯಡ್ ಬಡವರ ವಿಷಯವಾಗಿಯೆ ಬರೆಯುತ್ತಾನೆ. ಇವನದು ಕಹಿ ನಿರಾಶೆಯ ಮನೋಭಾವ. ಪ್ರಕೃತಿಯಲ್ಲ ಆಸಕ್ತಿ ತೋರುವ ಯೂರೋಪಿನ ಮೊದಲ ಕವಿ ಈತ. ಶ್ರಮಪಟ್ಟು ಕೆಲಸ ಮಾಡು, ನ್ಯಾಯವಾಗಿ ನಡೆದುಕೊ - ಇದು ಇವನ ಉಪದೇಶದ ಸಾರ. ಈತನೋ ಈತನ ಶಿಷ್ಯನೋ ಬರೆದ ಥಿಯೋಜನಿ ಗ್ರೀಕ್ ದೇವತೆಗಳನ್ನು ಕುರಿತ ಕಾವ್ಯ. ಈತನ ಅನಂತರ ಅನೇಕ ಕವಿಗಳು ಈತನನ್ನು ಅನುಕರಿಸಿದರಾದರೂ, ಅವರ ಕೃತಿಗಳಲ್ಲಿ ಕಾವ್ಯಗುಣ ಕಡಿಮೆ. 

ಹೋಮರನನ್ನು ಅನುಸರಿಸಿ ಹಲವರು ಟ್ರಾಯ್ ಮತ್ತು ತೀಬ್ಸ್ ಸಮಸ್ಯೆಗಳನ್ನು ಕುರಿತು ಬರೆದರು. ಇವು ಉಳಿದುಬಂದಿಲ್ಲ. ಕ್ರಿ.ಪೂ. ನಾಲ್ಕು ಐದನೆಯ ಶತಮಾನಗಳಲ್ಲಿ ಅವನ ಮಹಾಕಾವ್ಯದ ಅಣಕ ಬ್ಯಾಟ್ರಕೊಮೈಯೊ ಮ್ಯಾಕಿಯ (ಕಪ್ಪೆಗಳ ಮತ್ತು ಇಲಿಗಳ ಯುದ್ಧ) ದೊರೆತಿದೆ. ಹೋಮರನ ಭಜನಗೀತೆಗಳೆನ್ನಿಸಿಕೊಂಡ ಮೂವತ್ತಮೂರು ಕೃತಿಗಳು ಉಪಲಬ್ಧವಾಗಿವೆ. ಇವನ್ನು ಹೋಮರ್ ರಚಿಸಲಿಲ್ಲ. ಹಲವು ದೇವತೆಗಳ ಮಹಿಮೆಗಳನ್ನು ವರ್ಣಿಸುವ ಗೀತೆಗಳು ಇವು. ಹೋಮರ್, ಹೆಸಿಯಡ್ ಮತ್ತು ಮೇಲೆ ಸೂಚಿಸಿದ ಅವರನ್ನು ಅನುಕರಿಸಿದ ಕವಿಗಳು ಹೆಕ್ಸಾಮೀಟರ್ ಎಂಬ ಛಂದಸ್ಸನ್ನು ಬಳಸಿದರು. 

ಕಾವ್ಯದಲ್ಲಿ ವೈಯಕ್ತಿಕ ಅಂಶ ತಕ್ಕಮಟ್ಟಿನ ಪ್ರಾಧಾನ್ಯ ಪಡೆಯುವುದನ್ನು ಹೆಸಿಯಡ್‍ನ ಕಾವ್ಯಗಳಲ್ಲಿಯೆ ಕಾಣುತ್ತೇವೆ. ಮಹಾಕಾವ್ಯದ ಯುಗ ಮುಗಿಯುತ್ತ ಬಂದಂತೆ ಈ ವೈಯಕ್ತಿಕ ಅಂಶ ಬೆಳೆಯಿತು. ಇದರೊಂದಿಗೆ ಹೆಕ್ಸಾಮೀಟರಿನ ಬದಲು ಬೇರೆ ಛಂದಸ್ಸುಗಳನ್ನು ಕವಿಗಳು ಆರಿಸಿಕೊಂಡರು. (ಕ್ರಿ.ಪೂ. ಸು. 8 ನೆಯ ಶತಮಾನದಲ್ಲಿ ಸಂಗೀತದಲ್ಲಿ ಹೊಸ ಆಸಕ್ತಿ ಪ್ರಾರಂಭವಾಯಿತು; ಇದೂ ಕಾವ್ಯದ ಚರಿತ್ರೆಯನ್ನು ಪ್ರಭಾವಿಸಿದಂತೆ ತೋರುತ್ತದೆ.) ಕೊಳಲಿನ ವಾದನಕ್ಕೆ ಹೊಂದಿಕೊಂಡ ಎಲಿಜಿಯಕ್ ಕಾವ್ಯ ಪ್ರಾರಂಭದಲ್ಲಿ ಪ್ರಣಯ ಮತ್ತು ಶೌರ್ಯಗಳನ್ನು ಹಾಡಿ ಹೊಗಳಿತೆಂದು ಕಾಣುತ್ತದೆ. ಎಫೀಸಸಿನ ಕ್ಯಾಲಿನಸ್‍ನ (ಕ್ರಿ.ಪೂ. ಸು. 660) ಕವನ ಈ ಪ್ರಕಾರದಲ್ಲಿ ನಮಗೆ ದೊರೆತಿರುವ ಅತಿ ಪ್ರಾಚೀನ ರಚನೆ. ಕೊಲೊಫಾನನ ಮಿಮ್ನೆರ್‍ಮಸ್ (ಕ್ರಿ.ಪೂ. ಸು. 630) ಇಂದ್ರಿಯ ಸುಖವನ್ನು ನಿಸ್ಸಂಕೋಚವಾಗಿ ಹೊಗಳಿದ ಮೊದಲ ಕವಿ. ಆಕಿಲೋಕಸ್ (ಕ್ರಿ.ಪೂ. 7 ನೆಯ ಶತಮಾನ) ಎಲಿಜಿಯಕ್ ಕಾವ್ಯದ ವಸ್ತುಗಳ ವ್ಯಾಪ್ತಿಯನ್ನು ಹಿಗ್ಗಿಸಿದ; ಐಯಾಂಬಿಕ್ ಮತ್ತು ಟ್ರೊಕೆಯಿಕ್ ಛಂದಸ್ಸುಗಳಿಗೆ ಪರಿಪೂರ್ಣತೆಯನ್ನು ತಂದುಕೊಟ್ಟ. ತನ್ನ ಟೀಕೆಯ ತೀಕ್ಷ್ಣತೆಯಿಂದ ಈತ ಚೇಳು ಎಂಬ ಹೆಸರನ್ನು ಪಡೆದ. ಇವನ ಬರೆಹದಲ್ಲಿ ಯಾವ ಆದರ್ಶವೂ ಕಾಣದು.

ದೇವತೆಗಳ ಪೂಜೆಯಲ್ಲಿ ಸಂಗೀತ ಮತ್ತು ನೃತ್ಯವನ್ನು ಬಳಸುವ ಸಂಪ್ರದಾಯ ಗ್ರೀಕರಲ್ಲಿತ್ತು. ನಾಯಕನೊಬ್ಬನ ಮಾರ್ಗದರ್ಶನದಲ್ಲಿ ಲಯಬದ್ಧ ಚಲನೆಗಳೊಂದಿಗೆ ಮೇಳದವರು ಹಾಡುಗಳನ್ನು ಹಾಡುತ್ತಿದ್ದರು. ಈ ಸಂಪ್ರದಾಯದಿಂದ ಮೇಳ ಕಾವ್ಯ ಉದಿಸಿತು. ಸಾಮಾನ್ಯವಾಗಿ ಇದು ಒಬ್ಬ ದೇವತೆಯನ್ನು ಅಥವಾ ದೇವತಾ ಸದೃಶ ಶೂರನನ್ನು ಕುರಿತದ್ದು. ಇದರಲ್ಲಿ ನೀತಿವಾಕ್ಯಗಳೂ ಸಮೃದ್ಧವಾಗಿರುತ್ತಿದ್ದುವು. ಸ್ಪಾರ್ಟದ ಆಲ್ಕ್‍ಮನ್ ಬರೆದ ಕವನಗಳ ಭಾಗಗಳು ಮಾತ್ರ ದೊರೆತಿದ್ದರೂ ಆತ ಪ್ರತಿಭಾವಂತ ಎನ್ನುವುದಕ್ಕೆ ತಕ್ಕಷ್ಟು ಸಾಕ್ಷ್ಯ ಇಲ್ಲಿದೆ.

ಕ್ರಿ.ಪೂ. ಸು. 600 ರ ಹೊತ್ತಿಗೆ ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಹೊಸದೊಂದು ಕಾವ್ಯಪ್ರಕಾರ ಲೆಸ್ಬಾಸಿನಲ್ಲಿ ಉದಯವಾಯಿತು. ಇದೇ ಲಿರಿಕ್ (ಭಾವಗೀತೆ). ಲೈರ್ ಎಂಬ ವಾದ್ಯಕ್ಕೆ ಹೊಂದಿಕೊಂಡ ಹಾಡು ಲಿರಿಕ್. ಈಗ ಗ್ರೀಸಿನ ಲಿರಿಕ್‍ಗಳು ಉಳಿದುಬಂದಿದ್ದರೂ ಅವುಗಳ ಸಂಗೀತಭಾಗ ಸಂಪೂರ್ಣವಾಗಿ ನಷ್ಟವಾಗಿದೆ. ಭಾವಗೀತೆಯ ಚರಿತ್ರೆಯಲ್ಲಿ ಮೊದಲಿನ ಹೆಸರು ಟರ್‍ಪ್ಯಾಂಡರನದು (ಕ್ರಿ.ಪೂ.7 ನೆಯ ಶತಮಾನ). ಬಹು ಪ್ರಸಿದ್ಧ ಕವಿಗಳು ಅಲ್‍ಸೇಯಿಯಸ್ (7 ನೆಯ ಶತಮಾನದ ಉತ್ತರಾರ್ಧ ) ಮತ್ತು ಸ್ಯಾಫೊ (7 ನೆಯ ಶತಮಾನ). ಅಲಸೇಯಿಯಸ್‍ನ ಕವನಗಳಲ್ಲಿ ಸೂಕ್ಷ್ಮತೆ ಇಲ್ಲ. ಆದರೆ ಭಾವದ ತೀವ್ರತೆ, ಭಾಷೆಯ ಮಿತವ್ಯಯ ಉಂಟು. ವಿವರಗಳನ್ನು ಕಾಣುವ ಕಣ್ಣುಂಟು. ಚಟುವಟಿಕೆಯ, ತೀಕ್ಷ್ಣ ಭಾವನೆಗಳ ಮನುಷ್ಯ ಬರೆದ ಕವನಗಳು ಇವು. ಸ್ಯಾಫೊ ನಮಗೆ ತಿಳಿದಿರುವ ಮಟ್ಟಿಗೆ ಪ್ರಪಂಚದ ಮೊದಲ ಕವಯಿತ್ರಿ. ಹಲವು ದಂತಕಥೆಗಳ ಕೇಂದ್ರ ಇವಳು. ಪ್ಲೇಟೊ ಇವಳನ್ನು ಕಾವ್ಯದೇವತೆಗಳ ಸಾಲಿನಲ್ಲಿ ನಿಲ್ಲಿಸಿದ. ಭಾವೋದ್ವೇಗಕ್ಕೆ ಇನ್ನೊಂದು ಹೆಸರೇ ಸ್ಯಾಫೊ ಎನ್ನುವಂತಿದೆ ಇವಳ ಪ್ರಣಯಗೀತೆಗಳು. ಇವಳದು ನೇರವಾದ, ಸರಳವಾದ, ಉದ್ವೇಗಪೂರ್ಣ ಭಾಷೆ. ಗ್ರೀಕ್ ಕಾವ್ಯದಲ್ಲಿ ವಿರಳವಾದ ಪ್ರಕೃತಿವರ್ಣನೆ ಇವಳ ಕವನಗಳಲ್ಲಿ ಸಾಕಷ್ಟಿದ್ದು ಇವಳ ಆಳವಾದ ನಿಸರ್ಗ ಪ್ರೇಮಕ್ಕೆ ಸಾಕ್ಷಿಯಾಗಿದೆ. ಇವಳ ಪ್ರಣಯ ಗೀತೆಗಳಲ್ಲಿ ಬಹು ಸಂಖ್ಯೆಯವು ಬಾಲಕಿಯರನ್ನು ಕುರಿತವು ಎಂಬುದು ಕುತೂಹಲಕರ ಅಂಶ. ನಿತ್ಯದ ಭಾಷೆಗೆ ಇವಳ ಕವನಗಳಲ್ಲಿ ಅಭೂತಪೂರ್ವ ನಯ ಮತ್ತು ಶಕ್ತಿ ಲಭ್ಯವಾಗಿವೆ. ಬೆಂಕಿಯಂತೆ, ಪ್ರವಾಹದಂತೆ ತನ್ನ ಚೇತನ ನಮ್ಮ ಸುತ್ತುಗಟ್ಟಿದ ಪ್ರಣಯವನ್ನು ವರ್ಣಿಸುವಾಗಲೂ ಸುಸಂಸ್ಕøತ ಮನೋಧರ್ಮವನ್ನು ಈಕೆ ಪ್ರಕಟಿಸುತ್ತಾಳೆ. ಜಗತ್ತಿನ ಸಾಹಿತ್ಯದಲ್ಲಿಯೇ ಕುತೂಹಲಕರವಾದ ವ್ಯಕ್ತಿತ್ವವನ್ನು ಪಡೆದ ಕವಯಿತ್ರಿಗಳಲ್ಲಿ ಒಬ್ಬಳು, ಸ್ಯಾಫೊ. 

ಅಲ್‍ಸೇಯಿಯಸ್ ಮತ್ತು ಸ್ಯಾಫೊಗಳ ಭಾವಗೀತೆಗಳು ತುಂಬ ಜನಪ್ರಿಯವಾಗಿ ಏಷ್ಯ ಮೈನರ್ ಪ್ರದೇಶಕ್ಕೆ ಹಬ್ಬಿದುವು. ಭಾವಗೀತೆಯ ಚರಿತ್ರೆಯಲ್ಲಿ ಮುಂದಿನ ದೊಡ್ಡ ಹೆಸರು ಈ ಪ್ರದೇಶದ (ಟೀ ಆಸ್‍ನ ) ಅನಾಕ್ರಿಯಾನನದು (ಕ್ರಿ.ಪೂ.572? - 485?). ಈತ ಭೋಗಪ್ರಿಯನಾದರೂ ಇಂದ್ರಿಯಲೋಲುಪ ಎನ್ನುವುದು ಉತ್ಪ್ರೇಕ್ಷೆಯಾದೀತು. ಪ್ರಣಯ ಮತ್ತು ಮದ್ಯಪಾನಗಳನ್ನು ಹೊಗಳುವ, ಲಘುಹೃದಯದಿಂದ ಹೊರಹೊಮ್ಮಿದ ಲವಲವಿಕೆಯ ಕವನಗಳು ಇವನವು. ಪುರಾಣ ಪ್ರತಿಮೆಗಳನ್ನು ಈತ ವಿಶೇಷವಾಗಿ ಬಳಸುತ್ತಾನೆ. ಇವನನ್ನು ಅನುಕರಿಸಿದವರು ಬಹುಮಂದಿ. ಆದರೆ ಅವರಲ್ಲಿ ಯಾರೂ ಇವನನ್ನು ಸರಿಗಟ್ಟಲಿಲ್ಲ.

ಕ್ರಿ.ಪೂ. ಆರನೆಯ ಶತಮಾನದಲ್ಲಿ ಕವಿಗಳು ಆಶ್ರಯದಾತರನ್ನು ಹೆಚ್ಚಾಗಿ ಅವಲಂಬಿಸಬೇಕಾಗಿ ಬಂದಿತು. ತಮ್ಮ ಕಲೆಯಲ್ಲಿ ವೈವಿಧ್ಯವನ್ನು ಅರಸಬೇಕಾಯಿತು. ಇದರಿಂದ ಮೇಳಗೀತ ಮತ್ತೆ ಪ್ರಾಧಾನ್ಯ ಪಡೆಯಿತು. ಈ ಕಾಲಕ್ಕೆ ಸೇರಿದ ಹಿಮೆರದ ಸ್ಟೆನಿಕೊರಸನ (ಕ್ರಿ.ಪೂ. 630 - 553) ಕವನಗಳಲ್ಲಿ ಕೆಲವು ತುಂಡುಗಳು ಮಾತ್ರ ಲಬ್ಧವಾಗಿವೆ. ಮೇಳದ ಪ್ರಗಾಥಕ್ಕೆ ಹೊಸ ರೂಪ ಕೊಟ್ಟು ಭಾವಗೀತೆ ಮತ್ತು ಕಥನಗಳ ಅಂಶವನ್ನು ಈತ ಬೆಳೆಸಿದನೆಂದು ಕಾಣುತ್ತದೆ. ರೀಜಿಯಮ್ಮಿನ ಇಬಿಕಸ್ (ಕ್ರಿ.ಪೂ. ಆರನೆಯ ಶತಮಾನ) ಪ್ರಣಯ ಕವನಗಳನ್ನು ಬರೆದ. ಈ ಕಾವ್ಯ ಪ್ರಕಾರವನ್ನು ಪ್ರತಿಭೆಯಿಂದ ಬೆಳಗಿಸಿದವರು ಸಿಮೊನೈಡೀಸ್ (ಕ್ರಿ.ಪೂ. 556 - 467) , ಪಿಂಡಾರ್ (ಕ್ರಿ.ಪೂ. 512 - 448) ಮತ್ತು ಬ್ಯಾಕಿಲಿಡೀಸ್ (ಕಿ.ಪೂ. 505 - 450). ಮೇಳಗೀತವೆಲ್ಲ ಸಾಮಾನ್ಯವಾಗಿ ದೇವತೆಗಳನ್ನು ಕುರಿತವು. ಅವು ಅವರ ಮಹಿಮೆಯನ್ನು ಬಿತ್ತರಿಸುತ್ತವೆ. ಅವರಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತವೆ. ಕೆಲವು ಮೇಳಗೀತಗಳು ಆಳುವ ಪ್ರಭುಗಳನ್ನು ಕುರಿತವು. ಎಲಿಜಿ ಮೇಳಗೀತ ಎರಡು ಪ್ರಕಾರಗಳಲ್ಲಿಯೂ ಖ್ಯಾತಿ ಗಳಿಸಿದ ಸಿಮೊನೈಡೀಸನ ಕವನಗಳಲ್ಲಿ ಲಭ್ಯವಾಗಿರುವುದು ಕೆಲವೇ. ಮ್ಯಾರಥಾನ್ ಕದನದ ಅನಂತರ ಅಲ್ಲಿ ಮಡಿದ ವೀರಶ್ರೇಷ್ಠರಿಗೆ ಚರಮ ಗೀತೆಗಳನ್ನು ಬರೆಯುವ ಸ್ಪರ್ಧೆಯಲ್ಲಿ ಸಿಮೊನೈಡೀಸ್ ಈಸ್ಕಿಲಸನನ್ನು ಸೋಲಿಸಿದ ಎಂದು ಐತಿಹ್ಯ ಉಂಟು. ಕಾವ್ಯ ಮಾತನಾಡುವ ಚಿತ್ರ, ಚಿತ್ರ ಮೌನವಾದ ಕಾವ್ಯ . ಎಂಬುದು ಇವನ ಸೂತ್ರಗಳಲ್ಲಿ ಒಂದು. ಇವನ ಕವನಗಳಲ್ಲಿ ದೃಶ್ಯಗಳು ವಿವರಗಳಿಂದ ತುಂಬಿಕೊಂಡು ಕಣ್ಣಿಗೆ ಕಟ್ಟುತ್ತವೆ. ಬಾಳಿನ ಅನಿಶ್ಚಯತೆಯ ಗಾಢ ಅರಿವು ಇವನ ಕಾವ್ಯದಲ್ಲಿ ಸಂಯಮದ ವಿಷಾದವನ್ನು ಮೂಡಿಸುತ್ತದೆ. ಚರಮಗೀತೆಗಳ ಎರಡು ಪಂಕ್ತಿಗಳಲ್ಲಿ ಅಥವಾ ನಾಲ್ಕು ಪಂಕ್ತಿಗಳಲ್ಲಿ ಒಬ್ಬ ವ್ಯಕ್ತಿಯ ಇಡೀ ಜೀವನವನ್ನು ಅಥವಾ ಸಾಧನೆಯನ್ನು ಈತ ಅಡಕ ಮಾಡಬಲ್ಲ. ಆಳವಾದ ಭಾವ ಇವನ ಕಾವ್ಯಗಳ ಸರಳ ಭಾಷೆಯಲ್ಲಿ ಅಡಗಿದೆ. ಇವನ ಸೋದರಳಿಯ ಬ್ಯಾಕಿಲಿಡೀಸ್ ಇವನಿಂದ ಪ್ರಭಾವಿತನಾದವ. ಕಥನ ಕವನದಲ್ಲಿ ಬ್ಯಾಕಿಲಿಡೀಸನದು ಎತ್ತಿದ ಕೈ. ಓದುಗರನ್ನು ಈತ ರೋಮಾಂಚನಗೊಳಿಸಬಲ್ಲ. ಮೇಳಕಾವ್ಯದಲ್ಲಿ ಪೌರಾಣಿಕ ಕಥೆಗಳನ್ನು ಸಮೃದ್ಧವಾಗಿ ಬಳಸಿಕೊಂಡ ಇವನದು ತಿಳಿಯಾದ ಶೈಲಿ. ಪಿಂಡಾರ್ ಗ್ರೀಸಿನ ಮಹಾಕವಿಗಳಲ್ಲಿ ಒಬ್ಬ. ನಾಡಿನ ಮಹಾ ಸಾಧನೆಗಳನ್ನು ಬರಲಿರುವ ಪೀಳಿಗೆಗಳಿಗೆ ಉಳಿಸಿಡುವುದು ಕಾವ್ಯದ ಮೊದಲ ಕರ್ತವ್ಯ ಎಂದು ಈತ ನಂಬಿದ್ದ. ಕಾವ್ಯ ಮನುಷ್ಯನ ಶೌರ್ಯ ಹಿರಿಮೆಗಳ ಮೇಲೆ ಅಮರವಾದ ಪ್ರಭೆಯನ್ನು ಚೆಲ್ಲುತ್ತದೆ. ಸತ್ತವರ ಚೇತನಗಳೂ ಕಾವ್ಯವನ್ನು ಆಲಿಸುತ್ತವೆ, ಆಸ್ವಾದಿಸುತ್ತವೆ ಎಂದು ಇವನ ನಂಬಿಕೆ ಉದ್ದೇಶಿತ, ಚಾತುರ್ಯದ ಜಟಿಲ ಕಲೆ ಇವನದು. ಇವನ ಕವನಗಳಲ್ಲಿ ಉಳಿದು ಬಂದಿರುವುವು ಬಹುಮಟ್ಟಿಗೆ ಗ್ರೀಸಿನ ಕ್ರೀಡಾ ಮಹೋತ್ಸವಗಳಿಗಾಗಿ ಬರೆದ ಮೇಳಗೀತೆಗಳು. ಇವನ ಕವನಗಳು ಕ್ಷಿಷ್ಟ, ಪದಗಳ ಹೊಸ ಜೋಡಣೆಯಿಂದ ದೃಶ್ಯ ಕಣ್ಣಿಗೆ ಕಟ್ಟುವಂತೆ ಮಾಡಬಲ್ಲ, ಸಂತೋಷವನ್ನು ನೀಡಬಲ್ಲ ಶಕ್ತಿ ಇವಕ್ಕಿದೆ.

ಈ ಮೂವರು ಪ್ರಖ್ಯಾತ ಕವಿಗಳ ಅನಂತರ ಮೇಳಗೀತ ಇಳಿಮುಖವಾಯಿತು. ನಾಟಕ ಪ್ರಾಧಾನ್ಯ ಗಳಿಸಿತು. ಇವರ ಅನಂತರ ಬಂದ ಕವಿಗಳಲ್ಲಿ ಸಾಮಾನ್ಯವಾಗಿ ಸಂಗೀತದ ಅಂಶವೇ ಹೆಚ್ಚು. ಶೈಲಿಯಲ್ಲಿ ಕೃತಕತೆ ತಲೆದೋರುತ್ತದೆ. ಕ್ರಿ. ಪೂ. 404 ರಲ್ಲಿ ಆದ ಆಥೆನ್ಸ್ ನಗರದ ಪತನ ಗ್ರೀಕ್ ಸಾಹಿತ್ಯಕ್ಕೇ ಒದಗಿದ ಮಹಾ ವಿಪತ್ತಾಯಿತು. ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಗ್ರೀಕ್ ಕಾವ್ಯ ಸ್ವಲ್ಪಮಟ್ಟಿಗೆ ಅಲೆಗ್ಸಾಂಡ್ರಿಯದಲ್ಲಿ ತಲೆ ಎತ್ತಿತು. ಕ್ಯಾಲಿಮಾಕಸ್ (ಕ್ರಿ. ಪೂ. 310 - 240) ಮತ್ತು ಇನ್ನು ಕೆಲವರು ಕವನಗಳನ್ನು ಬರೆದರು. ಇವರು ಬಹು ಶ್ರೇಷ್ಠವೆನ್ನಬಹುದಾದ ಕಾವ್ಯವನ್ನು ಬರೆಯಲಿಲ್ಲ. ಆದರೆ ಗಮನಿಸಬೇಕಾದ ಸಾಧನೆ ಇವರದು. ರೊಮ್ಯಾಂಟಿಸಿಸಂ ಮೊದಲು ಕಾಣಿಸಿಕೊಳ್ಳುವುದು ಇವರ ಕಾವ್ಯದಲ್ಲಿ. ಸಂತೃಪ್ತ ಜೀವನದ ಗ್ರಾಮಾಂತರ ಕಾವ್ಯ ಪ್ರಾರಂಭವಾದುದು ಇವರಿಂದ. ಕ್ಯಾಲಿಮಾಕಸ್ ಭಜನ ಗೀತಗಳನ್ನೂ ನಾಟುನುಡಿಗಳನ್ನೂ ಬರೆದ. ಇವನ ಸಮಕಾಲೀನ ರೋಡ್ಸಿನ ಅಪೊಲೋನಿಯಸ್ (ಕ್ರಿ. ಪೂ. 295 - 215) ಮಹಾಕಾವ್ಯವನ್ನು ಆರಿಸಿಕೊಂಡು ಮಧುರಪ್ರಣಯವನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಕಥೆ ಹೇಳುವಾಗ ಈತ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಮಾಡಬಲ್ಲ. ತಿಯಾಕ್ರಿಟಸ್ (ಕ್ರಿ.ಪೂ. 316 - 260) ಮುಂದಿನ ಕಾವ್ಯದ ಮೇಲೆ ತುಂಬ ಪ್ರಭಾವ ಬೀರಿದವ. ಸಿಸಿಲಿಯ ಕುರುಬರ ಜೀವನವನ್ನು ನೆಪಮಾಡಿಕೊಂಡು ಸಂತೃಪ್ತ ಜೀವನವನ್ನು ವರ್ಣಿಸಿ ಸುಂದರವಾದ ಕವನಗಳನ್ನು ಬರೆದು ಪ್ಯಾಸ್ಟೊರಲ್ ಸಂಪ್ರದಾಯವನ್ನು ಈತ ಪ್ರಾರಂಭಿಸಿದ. ನಿಸರ್ಗವನ್ನು ಪ್ರೀತಿಸಿ ಅದರ ನೂರು ವಿವರಗಳನ್ನು ಆಸಕ್ತಿಯಿಂದ ಗುರುತಿಸಿದ ಕವಿಯ ಕೃತಿಗಳು ಇವು. ಶಬ್ದಗಳನ್ನು ಈತ ಬಹು ಎಚ್ಚರಿಕೆಯಿಂದ ಆರಿಸಿದ್ದಾನೆ. ಮಾಸ್ಕಸ್ (ಕ್ರಿ.ಪೂ. 120) ಮತ್ತು ಬಿಯಾನ್ (ಕ್ರಿ.ಪೂ. 120) ಇವನನ್ನು ಅನುಕರಿಸಿದರು. 

ಕ್ಯಾಲಿಮಾಕಸ್ ಮತ್ತೆ ಜನಪ್ರಿಯಗೊಳಿಸಿದ ನಾಟುನುಡಿ ಶತಮಾನಗಳ ಕಾಲ ಉಳಿದು ಬಂತು. ಟಾರೆಂಟಮಿನ ಲಿಯೊನಿಡಾಸ್ (ಕ್ರಿ.ಪೂ. 274), ಆಸ್‍ಕ್ಲೆ ಪಿಯಡೀಸ್ (ಕ್ರಿ.ಪೂ. 290), ಮಿಲಿಯೇಜರ್ (ಕ್ರಿ.ಪೂ. 90), ಮೊದಲಾದವರು ಈ ಮಾಧ್ಯಮವನ್ನು ಬಳಸಿದರು. 

ಯೂರೋಪಿನ ಕಾವ್ಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಕಾವ್ಯಕ್ಕೆ ಗ್ರೀಸಿನ ಕೊಡುಗೆ ಅಮೂಲ್ಯವಾದುದು. ಮಹಾಕಾವ್ಯ, ಮೇಳಗೀತ, ಭಾವಗೀತೆ, ನಾಟುನುಡಿ, ಪ್ರಗಾಥ, ಗ್ರಾಮಾಂತರಕಾವ್ಯ- ಈ ಎಲ್ಲ ಕಾವ್ಯಪ್ರಕಾರಗಳ ತೊಟ್ಟಿಲು ಪ್ರಾಚೀನ ಗ್ರೀಸ್. ಈ ಎಲ್ಲ ಪ್ರಕಾರಗಳಲ್ಲಿ ಕವಿದಿಗ್ಗಜಗಳನ್ನು ಈ ಪುಟ್ಟದೇಶ ಕೊಟ್ಟಿತು. ಹೋಮರ್, ಹೆಸಿಯಡ್, ಅಲ್‍ಸೇಯಿಯಸ್, ಸ್ಯಾಫೊ, ಅನಾಕ್ರಿಯಾನ್, ಸಿಮೊನೈಡೀಸ್, ಪಿಂಡಾರ್, ಬ್ಯಾಕಿಲಿಡೀಸ್ - ಯಾವ ನಾಡಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಹೆಸರುಗಳು ಇವು. ಹಲವು ಬಗೆಯ ಅಪೂರ್ವ ಪ್ರಯೋಗಗಳ ತವರು ಗ್ರೀಸ್ ಕಾವ್ಯ. ವಿಭಾವನೆ ಹಾಗೂ ಬೌದ್ಧಿಕ ಶಕ್ತಿಗಳ ಅಪೂರ್ವ ಸಮ್ಮಿಲನವನ್ನು ಪ್ರಾಚೀನ ಗ್ರೀಕ್ ಕಾವ್ಯಗಳಲ್ಲಿ ಕಾಣುತ್ತೇವೆ. ಗ್ರೀಕ್ ಕವಿಗಳು ಧೀಮಂತರು. ಅಲ್ಲದೇ ಇವರ ಕಾವ್ಯದಲ್ಲಿ ಅಮೂರ್ತತೆಗೆ ಅವಕಾಶವೇ ಇಲ್ಲ. ಪಲಾಯನದ ಮನೋಧರ್ಮ ಇವರ ಬಳಿ ಸುಳಿಯದು. ಯಾವ ಭ್ರಾಂತಿಗಳಿಗೂ ವಶರಾಗದೆ ಜೀವನದ ವಾಸ್ತವಿಕತೆಯನ್ನು ಎದುರಿಸುವ ಕವಿಗಳು, ಈ ನಾಡಿನವರು. ಮನುಷ್ಯನೇ ಈ ಕಾವ್ಯದ ಕೇಂದ್ರ. ಮನುಷ್ಯನ ದೇಹ, ಮನುಷ್ಯನ ರಾಗಭಾವಗಳು, ಅವನ ಬಯಕೆಗಳು, ಅವನ ವಿಧಿ ಇವುಗಳಲ್ಲಿ ಗ್ರೀಕ್ ಕವಿಯ ಆಸಕ್ತಿ. ದೇವತೆಗಳೂ ಮುಖ್ಯರಾಗುವುದು ಮನುಷ್ಯನ ಜೀವನದಲ್ಲಿ ಅವರ ಪಾತ್ರದಿಂದ. ಭೂಮಿಯ ಮೇಲಿನ ಬಾಳಿನ ಚಟುವಟಿಕೆ, ಸೊಗಸು, ಸೌಂದರ್ಯಗಳಿಗೆ ಮಾರುಹೋಗುತ್ತಾನೆ, ಗ್ರೀಕ್ ಕವಿ. ಆದರೆ ಈ ಜೀವನವನ್ನು ವಿಶಾಲವಾದ ಹಿನ್ನೆಲೆಯಲ್ಲಿ ಕಾಣುತ್ತಾನೆ; ಅದು ಎಷ್ಟು ಹ್ರಸ್ವ, ಅದರಲ್ಲಿ ಎಷ್ಟು ನೋವಿದೆ ಎಂಬುದನ್ನು ಗುರುತಿಸುತ್ತಾನೆ. ಆದರೆ ಅತಿಭಾವುಕತೆಗೆ ವಶನಾಗುವುದಿಲ್ಲ. ಧೀಮಂತ, ಗಂಭೀರ ಚಿಂತನೆ ಭಾವುಕತೆಗೆ ಕಡಿವಾಣ ಹಾಕುತ್ತದೆ. ಬಾಳನ್ನು ಸಮಗ್ರವಾಗಿ ಕಾಣುವ ವಿಶಿಷ್ಟ ದೃಷ್ಟಿ. ಇಲ್ಲಿಯ ಮಹಾಕವಿಗಳದು. ವಿಶ್ವಕಾವ್ಯದ ಚರಿತ್ರೆಯ ಪ್ರಾರಂಭದ ಅಧ್ಯಾಯಗಳಲ್ಲಿ, ಬಹು ಉಜ್ವಲವಾದ ಅಧ್ಯಾಯಗಳಲ್ಲಿ ಒಂದು, ಗ್ರೀಕ್ ಕಾವ್ಯದ ಚರಿತ್ರೆ.			(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ